ಸುರಸಲಿಲೆ ಶಾಲ್ಮಲೆ
ಸೋಮೇಶ ಪದದೊರತೆ
ಪರಮ ಪಾವನ ಚರಿತೆ
ನಿತ್ಯ ನಿರ್ಮಲ ಸರಿತೆ ಸಿರಿ ಶಾಲ್ಮಲೆ
ವರ ಮುನೀಶ್ವರ ಪರಂ-
ಪರೆಯ ಪುರ ಸ್ವರ್ಣಲತೆ-
-ಗಮೃತದ ನೆಲೆಯು ನೀ ಪುಣ್ಯ ಸಲಿಲೆ
ಗಿರಿಕಾನನದಿ ನಲಿವ
ತರುಲತೆಯ ಪೋಷಿಸುವ
ಕದಳಿ ಕಾಳ್ಮೆಣಸು ಪೂಗಗಳ ಜೀವ
ಯಾಚಕೀ ನದಿ ತನಯೆ
ನಾಚಿ ನಾಚುತ ಹರಿವೆ
ಲೋಚನಕೆ ನಿತ್ಯ ಸಂಭ್ರಮವನೀಯ್ವೆ
ಶೈವ ವೈಷ್ಣವ ಜೈನ
ಕ್ಷೇತ್ರಗಳ ಸಾಂಗತ್ಯ
ಹಿರಿಕಿರಿಯ ತೊರೆಗಳಿಗೆ ನಿತ್ಯ ಸಾರಥ್ಯ
ಉತ್ತಿ ಬಿತ್ತುವ ಹೊಲವ
ಸುತ್ತಲಿನ ಗಿಡಮರವ
ಬತ್ತದಲೆ ನೀರಿತ್ತು ಕಾಪಿಡುವ ಕೃತ್ಯ.
ಶಿವನ ಸಾವಿರ ಶಿರವ
ನಿತ್ಯ ಅಭಿಷೇಚಿಸುತ
ಭರದಿ ಧುಮುಕುವೆ ಗಣಾಧಿಪನ ಬಳಿಗೆ
ದೇವದೇವರ ಸೇವೆ
ನಿರುತ ಗೈಯ್ಯುತಲಿ
ಪಡುವಣಕೆ ಸಾಗುವೆ ಸರಸಿನರಸನೆಡೆಗೆ.
✍️.....ಶ್ರೀಪತಿಸುತ

0 Comments:
Post a Comment
Subscribe to Post Comments [Atom]
<< Home