ಶ್ರೀ ಹರಿಗುರು ಪ್ರೇರಣಾನುಗ್ರಹದಿಂದ ರಚಿತಗೊಂಡ ಶ್ರೀ ವೇಂಕಟೇಶ ನಿತ್ಯ ಪ್ರದಕ್ಷಿಣಾ ಭಾಮಿನಿ.
ವಾರದ ಏಳುದಿನಗಳ ಹೆಸರುಗಳನ್ನು ಮೊದಲ್ಗೊಂಡು ರಚನೆಗೊಂಡ ಸಪ್ತಕವಿದು.
ಶ್ರೀ ವೇಂಕಟೇಶನ ಚರಣಕಮಲಗಳಲ್ಲಿ ರಥಸಪ್ತಮಿಯ ಪುಣ್ಯಪರ್ವದಂದು ಸಮರ್ಪಣೆ
ರವಿಯು ಜವದಲಿ ಭುವಿಯನಾವರಿ
ಸಿರುವ ಕಗ್ಗತ್ತಲೆಯ ಕಳೆವೊಲು
ಭವ ತಮವ ಕಳೆ ಭುವಿ ದಿವಿಗವಿಗ
ವಿಳೊಡೆಯ ಮಾಧವನೇ
ಹಾವನು ತುಳಿದು ಮಾವನನಳಿದ
ಭಾವಜನ ಪಿತ ಪಾವನಚರಿತ
ಕಾವುದೆಮ್ಮನು ದೇವ ಶ್ರೀಭೂರಮಣ ವೇಂಕಟನೇ.
ಇಂದುಧರ ಸಖ ಮಂದರೋದ್ಧರ
ಸುಂದರಾನನೆ ಇಂದಿರೆರಮಣ
ನಂದನಂದನ ವೃಂದ ಸುರಮುನಿ ವಂದ್ಯ ಗೋವಿಂದ
ಸಿಂಧುಶಯನನೆ ಕಂದರಾದೆ
ಮ್ಮಗಳ ಕುಂದುಗಳೆಲ್ಲ ಮನ್ನಿಸಿ
ಬಂದೊದಗುತೆಂದೆಂದು ಕಾಯ್ವುದು ತಂದೆ ವೇಂಕಟನೇ.
ಮಂಗಳಾಂಗನೆ ತುಂಗವಿಕ್ರಮ
ರಂಗ ಗೋಪೀ ಸಂಗ ಗಂಗಾ
ಮೂಲಪದ ತಂಗದಿರ ನಗುಮೊಗ ದುರಿತದಲ ಭಂಗ
ಜಂಗಮದ ಜಗದಂಗಳದಿ ಹಂ
ಗಿಗರ ಜಂಗನು ಹಿಂಗಿಸುತ ಮನ
ದಿಂಗಿತವ ಸಲಿಸೈ ಶುಭಾಂಗ ಕೃಪಾಂಗ ವೇಂಕಟನೇ.
ಸೌಮ್ಯ ಸುಂದರ ಮಂದಹಾಸದಿ
ನಾಮ ಸಾವಿರಮೀರಿ ಶೋಭಿಪ
ಭಾಮೆ ಶ್ರೀ ರಮೆ ಪ್ರೇಮ ನಿಜ ಸುಖಧಾಮ ಶ್ರೀ ರಾಮಾ
ನೇಮದಲಿ ಸೇವಿಪ ಸುಜನಮನ
ಕಾಮನೆಯ ಕರುಣಿಸುತ ತವಪದ
ಧಾಮದಲಿ ಮನಲೀನವಾಗಿಸು ಶ್ಯಾಮ ವೇಂಕಟನೇ.
ಗುರುವೆ ವರಸುರತರುವೆ ಪರತರ
ದರಿವೆ ನರಸಾರಥಿಯೆ ಮುರಹರ ತರಿದು ಮಾಯೆಯ ಚರಣಮೂರಲಿ ಮೂರ್ಜಗವನಳೆದೆ
ಹರಿಯೇ ಕರುಣಾಪೂರ್ಣ ಶರಧಿಯೆ
ಸರಿಸುತಲಿ ಕಲಿಕಲ್ಮಷದ ತೆರೆ
ಸುರಿಸುವುದು ಸುಜ್ಞಾನ ಸುಧೆಯನು
ವರದ ವೇಂಕಟನೇ.
ಭೃಗುಮುನಿಯ ಪದದೊದೆಯ ಸಹಿಸುತ
ಜಗದಘವ ಪರಿಹರಿಸಲೋಸುಗ
ಖಗಚರನರಸ ನಗುತ ಸೊಗದೀ ಜಗದೊಳೈತಂದೆ
ಜಗದೊಡತಿ ರಮೆ ಪದುಮಮುಖಿಯರು
ಹಗೆಗಿಳಿದು ಬಲು ಜಗಳವಾಡಲು
ನಗಶಿರದಿ ಶಿಲೆಯಾದೆ ನೀ-
-ನಘಹರನೆ ವೇಂಕಟನೇ.
ಮಂದಗಮನೆಯರ್ ಮಂದಿರದೊಳಗೆ
ಬಂದು ತಾ ಹಾಲ್ಮೊಸರು ಬೆಣ್ಣೆಯ
ಮೆಂದು ಸಂದಿಯೊಳಡಗುತಲೆ
ಸುಂದರಿಯ ಸಂಧಿಸಿದೆ.
ತಂದೆ ನಿನ್ನ ಪದಾರವಿಂದವ
ಹೊಂದುವಂತೆನ್ನಂತರಂಗವ
ನಿಂದು ಮುಂದೆಂದೆಂದು ಸುಂದರಗೊಳಿಸು ವೇಂಕಟನೇ.
ವಾರದೇಳು ದಿನಗಳಲೀ ನಾ
ರಾಯಣನ ಸ್ತುತಿಯನ್ನು ಪಾಡಲು
ಘೋರಸಂಕಟದಿಂದ ಶ್ರೀ ಹರಿ ಪಾರುಗಾಣಿಸುವಾ
ತೋರುತಲಿ ಪರತರದ ದಾರಿಯ ಹಾರ ಕೇಯೂರಧರ ಕೌಸ್ತುಭ
ಧಾರಿ ಶ್ರೀಪತಿಸುತನುತನು ಕರುಣಿಪ ಸುಸಂಪದವಾ
✍️ಶ್ರೀಪತಿಸುತ
🙏
