Friday, January 10, 2025

ಸುರಸಲಿಲೆ ಶಾಲ್ಮಲೆ


ಸೋಮೇಶ ಪದದೊರತೆ
ಪರಮ ಪಾವನ ಚರಿತೆ
ನಿತ್ಯ ನಿರ್ಮಲ ಸರಿತೆ ಸಿರಿ ಶಾಲ್ಮಲೆ
ವರ ಮುನೀಶ್ವರ ಪರಂ-
ಪರೆಯ ಪುರ ಸ್ವರ್ಣಲತೆ-
-ಗಮೃತದ ನೆಲೆಯು ನೀ ಪುಣ್ಯ ಸಲಿಲೆ

ಗಿರಿಕಾನನದಿ ನಲಿವ
ತರುಲತೆಯ ಪೋಷಿಸುವ
ಕದಳಿ ಕಾಳ್ಮೆಣಸು ಪೂಗಗಳ ಜೀವ
ಯಾಚಕೀ ನದಿ ತನಯೆ
ನಾಚಿ ನಾಚುತ ಹರಿವೆ
ಲೋಚನಕೆ ನಿತ್ಯ ಸಂಭ್ರಮವನೀಯ್ವೆ

ಶೈವ ವೈಷ್ಣವ ಜೈನ
ಕ್ಷೇತ್ರಗಳ ಸಾಂಗತ್ಯ
ಹಿರಿಕಿರಿಯ ತೊರೆಗಳಿಗೆ ನಿತ್ಯ ಸಾರಥ್ಯ
ಉತ್ತಿ ಬಿತ್ತುವ ಹೊಲವ
ಸುತ್ತಲಿನ ಗಿಡಮರವ
ಬತ್ತದಲೆ ನೀರಿತ್ತು ಕಾಪಿಡುವ ಕೃತ್ಯ.

ಶಿವನ ಸಾವಿರ ಶಿರವ
ನಿತ್ಯ ಅಭಿಷೇಚಿಸುತ
ಭರದಿ ಧುಮುಕುವೆ ಗಣಾಧಿಪನ ಬಳಿಗೆ
ದೇವದೇವರ ಸೇವೆ
ನಿರುತ ಗೈಯ್ಯುತಲಿ
ಪಡುವಣಕೆ ಸಾಗುವೆ ಸರಸಿನರಸನೆಡೆಗೆ.

✍️.....ಶ್ರೀಪತಿಸುತ


Thursday, January 9, 2025

ಪುಣ್ಯನದಿ  ಅಘನಾಶಿನೀ

ಅಘನಾಶಿನೀ ನಗ ಚಾರಿಣೀ$$$
ಜಗದ ಧಗೆ ತಣಿಸುವ ಧುನೀ
ಖಗಜಗಜಲ ಚರ ಕುಲ ಪೋಷಿಣಿ
ಸೊಗವನೀಯ್ವ ತರಂಗಿಣೀ.

ಶಿರಸಿಪುರ ಶಂಕರನ ಚರಣದೊ
ಳುದಿಸಿ ಜನ ತೃಷೆ ತಣಿಸಿದೆ
ಪುರಪತಿ ಗಣಪ ಮಾರಿಕಾಂಬೆಗೆ
ಮಣಿಯುತಲಿ ಸಂಚರಿಸಿದೆ.

ವರಪ್ರಸೂತ ಪುರಾಧಿಪತಿ ಹರ
ಸುತ ಸುಮುಖ ಸಂಪ್ರೀತಳೇ
ಸಿರಿ ನೆಲೆಯ
ಲಕುಮೀ ನೃಸಿಂಹನ
ಚರಣದಡಿಯಲಿ ನಲಿವಳೇ.

✍️....ಶ್ರೀಪತಿ ಸುತ


ನಮಿಪೆ ವಾರಣವದನ  ಅಮಿತ ಕರುಣಾ ಸದನ

ಸುಮಸುಕೋಮಲ ಚರಣ  ವಿಘ್ನ ಹರಣಾ

 

ಶಂಭು ಸುತ ಗಂಭೀರ  ಅಂಬಾ ಕೃತ ಶರೀರ

ಹೇರಂಬ ಅವಿಡಂಬ  ಲಂಬೋದರಾ

 

ಪಂಚಖಾದ್ಯ ಪ್ರಿಯನೇ  ವಾಂಛಿತಾರ್ಥ ಪ್ರದನೇ

ಪಂಚವಾದ್ಯ ಪ್ರಮೋದ  ಪಂಕೇಜ ಪದನೇ                      

 

 

                                                             ..‌‌‌...✍️ಶ್ರೀಪತಿ ಸುತ